ಬಾಬರ್
(ಜಹಿರುದ್ದೀನ್ ಮಹಮದ್) 1483-1530. ಮುಗಲ್ ಸಾಮ್ರಾಜ್ಯ ಸ್ಥಾಪಕ, ಕವಿ, ದಿನಚರಿಕಾರ. 1483 ಫೆಬ್ರುವರಿ 14 ರಂದು ಜನಿಸಿದ. ತಂದೆಯ ಕಡೆಯಿಂದ ತೈಮೂರ್ ತಾಯಿಯ ಕಡೆಯಿಂದ ಚಂಗೇಸ್‍ಖಾನ್ ವಂಶಸ್ಥ. ಹನ್ನೊಂದನೆಯ ವಯಸ್ಸಿನಲ್ಲಿ ಇವನ ತಂದೆ ತೀರಿಕೊಂಡ. ಫರಗಣ ಎಂಬ ಸಣ್ಣ ಸಂಸ್ಥಾನಕ್ಕೆ ಆಗ ಇವನು ಉತ್ತರಾಧಿಕಾರಿಯಾದ. ಬಲುಬೇಗನೆ ಅಲ್ಲಿಂದ ಹೊರದೂಡಲ್ಪಟ್ಟ. ಜೀವನದ ಪ್ರಾರಂಭದಲ್ಲೇ ಕಹಿ ಉಂಡರೂ ಇವನೊಬ್ಬ ಮಹಾತ್ವಾಕಾಂಕ್ಷಿ. 21ನೆಯ ವಯಸ್ಸಿನವನಾದಾಗ ಕಾಬೂಲನ್ನು ಆಕ್ರಮಿಸಿದ (1504). ತನ್ನ ಪೂರ್ವಿಕ ತೈಮೂರನ ರಾಜಧಾನಿಯಾಗಿದ್ದ ಸಮರ ಖಂಡ್ ಜಯಿಸಲು ಪ್ರಯತ್ನಿಸಿ ವಿಫಲನಾದ. ಹೀಗೆ ಸೋತಿದ್ದೇ ಬಾಬರನಿಗೆ ತನ್ನ ಅದೃಷ್ಟವನ್ನು ಭಾರತದಲ್ಲಿ ಪರೀಕ್ಷಿಸಬೇಕೆಂಬ ಆಸೆ ಅಂಕುರಿಸಲು ಕಾರಣ.

ಭಾರತದ ರಾಜಕೀಯ ಪರಿಸ್ಥಿತಿ ಬಾಬರನ ಆಸೆಯ ಬೇರಿಗೆ ನೀರೆರೆಯಿತು. ದೆಹಲಿಯ ಸುಲ್ತಾನರು ತಮ್ಮ ಹಳೆಯ ಪ್ರದೇಶಗಳನ್ನೆಲ್ಲ ಕಳೆದುಕೊಂಡು ಛಿದ್ರವಾಗುವ ಸ್ಥಿತಿ ತಲಪಿದ್ದರು. ಡೆಕ್ಕನ್ ದೆಹಲಿಯಿಂದ ಪ್ರತ್ಯೇಕಗೊಂಡು ಬಹಳ ದಿನಗಳಾಗಿದ್ದುವು. ಉತ್ತರ ಭಾರತದಲ್ಲಿ ಕೂಡ ಕಾಶ್ಮೀರ, ಮಾಳವ, ಗುಜರಾತ್, ಬಂಗಾಳಗಳು ಪ್ರತ್ಯೇಕ ಆಫ್ಘನ್ ಆಡಳಿತಗಾರರ ಕೈಯಲ್ಲಿ ಸರ್ವತಂತ್ರವಾಗಿದುವು. ರಾಜಪುಟಾನದಲ್ಲಿ ರಾಜಪೂತ ಮುಖ್ಯರು ಸ್ವತಂತ್ರರಾಗಿದ್ದರು. ಅಲ್ಲಿ ಆಳುತ್ತಿದ್ದ ಮೇವಾರದ ರಾಣಾಸಂಗ್ರಾಮ ಸಿಂಹ ಉತ್ತರ ಭಾರತದಲ್ಲಿ ಹಿಂದೂ ಆಡಳಿತವನ್ನು ಪುನಃ ಸ್ಥಾಪಿಸಲು ಯೋಚಿಸುತ್ತಿದ್ದ. ಪಂಜಾಬ್ ದೌಲತ್‍ಖಾನ್ ಎಂಬ ಸರ್ದಾರನ ಅಂಕಿತದಲ್ಲಿತ್ತು. ಇಬ್ರಾಹಿಮ್ ಲೋದಿ ದೆಹಲಿಯ ಸಿಂಹಾಸನದಲ್ಲಿ ಕುಳಿತಿರುವ ಬಗ್ಗೆ ಅವನ ಚಿಕ್ಕಪ್ಪ ಆಲಮ್‍ಖಾನ್‍ನಿಗೆ ಅಸಮ್ಮತಿಯಿತ್ತು. ಬಾಬರನ ಧಾಳಿಯ ವೇಳೆ ಭಾರತದಲ್ಲಿ ಸಾಮ್ರಾಜ್ಯವೇ ಇರಲಿಲ್ಲ. ಭಾರತದ ಪ್ರಾಂತ್ಯಗಳಲ್ಲಿಯ ಪರಸ್ಪರ ಕಚ್ಚಾಟಗಳೇ ಬಾಬರನಿಗೆ ಸಹಾಯ ಮಾಡಿದುವು. ದೌಲಾತ್‍ಖಾನ್ ಮತ್ತು ಆಲಮ್‍ಖಾನ್‍ರು ಬಾಬರನನ್ನು ಭಾರತಕ್ಕೆ ಧಾಳಿ ಮಾಡಲು ಆಹ್ವಾನಿಸಿದರು. ತೈಮೂರನ ಹಾಗೆಯೇ ಬಾಬರ್ ದೆಹಲಿ ಸುಲ್ತಾನನನ್ನು ಮಣ್ಣು ಮುಕ್ಕಿಸಿ ತಮ್ಮಿಬ್ಬರಲ್ಲಿ ಒಬ್ಬರಿಗೆ ಪಟ್ಟ ಬಿಟ್ಟುಕೊಡುವನೆಂದು ಅವರು ಭಾವಿಸಿದ್ದರು. ಅವರ ಆಹ್ವಾನವನ್ನು ಸಂತೋಷದಿಂದ ಒಪ್ಪಿಕೊಂಡ ಬಾಬರ್ 1524ರಲ್ಲಿ ಪಂಜಾಬ್ ಪ್ರವೇಶಿಸಿದ. ಲಾಹೋರನ್ನು ಆಕ್ರಮಿಸಿ ಭಾರತದಲ್ಲೇ ಉಳಿಯುವ ಇಚ್ಛೆ ವ್ಯಕ್ತಪಡಿಸಿದ. ಇದು ದೌಲತ್‍ಖಾನ್ ಮತ್ತು ಆಲಮ್‍ಖಾನ್‍ರನ್ನು ಕಂಗೆಡಿಸಿತು. ಅವರು ಬಾಬರನನ್ನು ಕೈಬಿಟ್ಟರು. ಇದರಿಂದ ಇವನು ಕಾಬೂಲಿಗೆ ಹಿಂದಿರುಗಬೇಕಾದ್ದು ಅನಿವಾರ್ಯವಾಯಿತು. ಮರುವರ್ಷ ಬೃಹತ್ ಸೈನ್ಯ ತೆಗೆದುಕೊಂಡು ಬಾಬರ್ ಪುನಃ ಬಂದ. ದೌಲತ್‍ಖಾನ್ ಶರಣಾಗುವಂತೆ ಮಾಡಿದ. 1526 ಏಪ್ರಿಲ್ 21ರಂದು ನಡೆದ ಪಾಣಿಪಟ್ ಕದನದಲ್ಲಿ (ನೋಡಿ- ಪಾಣಿಪಟ್-ಕದನಗಳು) ಇಬ್ರಾಹಿಮ್ ಲೋದಿಯನ್ನು ಸೋಲಿಸಿ ಕೊಂದ. ಈ ವಿಜಯದಿಂದ ದೆಹಲಿ ಮತ್ತು ಆಗ್ರಾಗಳು ಬಾಬರನ ವಶವಾದುವು. ಇವನ ಪ್ರಭುತ್ವವನ್ನು ಭಾರತದ ವಿವಿಧ ಪ್ರಾಂತ್ಯದಲ್ಲಿ ಆಳುತ್ತಿದ್ದ ಆಫ್ಘನ್ ಮುಖ್ಯಸ್ಥರಾಗಲಿ ಮೇವಾಡದ ರಾಣಾ ಸಂಗ್ರಾಮಸಿಂಹನಾಗಲೀ ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಆದರೆ ರಾಜಪುತರು ಮತ್ತು ಆಫ್ಘನರು ಒಟ್ಟಾಗುವುದು ಸಾಧ್ಯವಾಗದ್ದರಿಂದ ಬಾಬರ್ ಅವರನ್ನು ಪ್ರತ್ಯೇಕವಾಗಿ ಎದುರಿಸಿದ. 1527 ಮಾರ್ಚ್ 16ರಂದು ರಾಣಾನನ್ನು ಲಖನೌದಲ್ಲಿ ಸೋಲಿಸಿದ ಅನಂತರ ಜಮ್ಮುವನ್ನು ದಾಟಿ ಚಾಂದೇರಿ ಕೋಟೆಗೆ ಮುತ್ತಿಗೆ ಹಾಕಿದ. ಹೀಗೆ ರಾಜಪುತರ ವಿರೋಧವನ್ನು ಧೈರ್ಯದಿಂದ ಎದುರಿಸಿದ. ಎರಡು ವರ್ಷಗಳ ಅನಂತರ ಗೋಗ್ರ ಕದನದಲ್ಲಿ ಬಿಹಾರ್ ಮತ್ತು ಬಂಗಾಳಗಳ ಆಫ್ಘನ್‍ರನ್ನೂ ಪರಾಭವಗೊಳಿಸಿದ. ಈ ಮೂರು ವಿಜಯಗಳು ಬಾಬರನನ್ನು ದೆಹಲಿಯ ದೊರೆಯಾಗಿ ಮಾಡಿದವು.

ಬಾಬರ್ ಹೀಗೆ ಭಾರತದಲ್ಲಿ ಮೊಗಲ್ ಸಾಮ್ರಾಜ್ಯ ಸ್ಥಾಪಿಸಿದ. ಈತ ಬಲು ಬೇಗನೆ ಸತ್ತಿದ್ದರಿಂದ (1530 ಡಿಸೆಂಬರ್ 20) ಸಾಮ್ರಾಜ್ಯವನ್ನು ಒಂದು ಸುವ್ಯವಸ್ಥಿತ ಆಡಳಿತಕ್ಕೆ ತರುವುದು ಸಾಧ್ಯವಾಗಲಿಲ್ಲ. ಇವನ ಉತ್ತರಾಧಿಕಾರಿಯಾಗಿ ಮಗ ಹುಮಾಯೂನ್ (ನೋಡಿ- ಹುಮಾಯೂನ್) ಪಟ್ಟಕ್ಕೆ ಬಂದ.

ಬಾಬರ್ ಕೇವಲ ಅದೃಷ್ಟದ ಮೇಲೆ ಬಂದವನಲ್ಲ. ಆತ ಜೀವನದಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿ ದೆಹಲಿಯ ಸಿಂಹಾಸನವನ್ನು ಏರಿದ. ತುರ್ಕಿ ಭಾಷೆಯಲ್ಲಿ ಬಾಬರ್ ಬರೆದ ನೆನಪುಗಳು ಅವನ ಸಾಹಿತ್ಯಕ ಅಭಿರುಚಿಗೆ ದ್ಯೋತಕ. ಬಾಬರನ ನೆನಪುಗಳನ್ನು ಅವನ ಮೊಮ್ಮಗ ಅಕ್ಬರ (1556-1605) ಪರ್ಷಿಯನ್ ಭಾಷೆಗೆ ಭಾಷಾಂತರಿಸಲು ವ್ಯವಸ್ಥೆ ಮಾಡಿದ.
(ಕೆ.ಟಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ